ಶ್ರೀ ಗಣಪತಿ ಕೆ ಉಪನಿರ್ದೇಶಕರು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ
ಉಡುಪಿ ಜಿಲ್ಲೆಯ ಶೈಕ್ಷಣಿಕ ರಂಗದ ಕ್ರಾಂತಿಕಾರ ಶ್ರೀ ಗಣಪತಿ ಕೆ ಅವರಿಗೆ ನಿವೃತ್ತಿಯ ಶುಭಾಶಯಗಳು
ಉಡುಪಿ 28: ಮೇ ತಿಂಗಳ 31ರಂದು ಉಡುಪಿ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ನಮ್ಮ ಆತ್ಮೀಯ ಶ್ರೀ ಕೆ.ಗಣಪತಿ ಸರ್ ಅವರು ನಿವೃತ್ತಿ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ರವರು ಅವರನ್ನು ಸನ್ಮಾನಿಸಿದರು. ಶಿಕ್ಷಣ ರಂಗದ ಸಮರ್ಥ ನಾಯಕ ನಾವಿಕ ಶ್ರೀ ಗಣಪತಿ ಕೆ ರವರ ಶಿಕ್ಷಣ ಕ್ಷೇತ್ರಕ್ಕೆ ಶುಭವಿದಾಯ ನೋವು ಮತ್ತು ಅನಿವಾರ್ಯತೆ ನಮಗೆ ಒದಗಿ ಬಂದಿದೆ.
ಶ್ರೀ ಗಣಪತಿ ಕೆ ಅವರ ಬಗ್ಗೆ ಬರೆಯಲು ನಮಗೆ ಹೆಮ್ಮೆ ಅನಿಸುತ್ತದೆ . ತೀರಾ ಹತ್ತಿರದಿಂದ ನೋಡಿದ ಸರಳ ಸಜ್ಜನಿಕೆಯ ಅವರ ವ್ಯಕ್ತಿತ್ವ ಅತ್ಯಂತ ವಿಶಿಷ್ಠವಾಗಿರುವಂತಹದ್ದು.
ಶಿವಮೊಗ್ಗಾ ಜಿಲ್ಲೆಯಲ್ಲಿ ಒಂದು ಗ್ರಾಮಾಂತರ ಪ್ರೌಢಶಾಲೆಯ ಮುಖ್ಯ ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿ ಮುಂದೆ ಹಂತ ಹಂತವಾಗಿ ಪದೋನ್ನತಿಯನ್ನು ಪಡೆದು ಕ್ಷೇತ್ರ ಸಮನ್ವಯಾಧಿಕಾರಿ, ಸಹಾಯಕ ನಿರ್ದೇಶಕ, ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ, ಹಲವು ಕಡೆಯಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಎಲ್ಲಾ ಅಧಿಕಾರಿಯ ಹುದ್ದೆಗಳನ್ನು ಅತ್ಯಂತ ಸಮರ್ಥವಾಗಿಯೇ ನಿಭಾಯಿಸಿದರು.
ಪ್ರಾಮಾಣಿಕ ವೃತ್ತಿ ನಿಷ್ಠೆಯಿಂದ ಬೆಂಗಳೂರಿನಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅವರು ಕಳೆದ ಎರಡು ವರ್ಷ ಮೂರು ತಿಂಗಳಿಂದ ಉಡುಪಿ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದುತ್ತಿದ್ದಾರೆ.
ಉಡುಪಿಯಲ್ಲಿ ಅವರ ಅಧಿಕಾರದ ಅವಧಿ ಸ್ಮರಣೀಯ
ಶ್ರೀ ಗಣಪತಿ ಕೆ ಅವರ ನಿರಂತರ ಪ್ರೋತ್ಸಾಹ ಶಿಕ್ಷಕರಿಗೆ ಅವರು ನೀಡಿದ ಮಾರ್ಗದರ್ಶನದ ರಿಣಾಮವಾಗಿ ಮುಂದಿನ ವರ್ಷದಲ್ಲಿ ಉಡುಪಿ ಜಿಲ್ಲೆಯು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನಕ್ಕೆ ಬಂದಿತು. ಈ ವರ್ಷ ಮತ್ತೆ ಎರಡನೇ ಸ್ಥಾನದಲ್ಲಿ ಬಂದಿದೆ. ಉಡುಪಿ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಈ ಎರಡು ವರ್ಷಗಳು ಐತಿಹಾಸಿಕವಾದ ಸಾಧನೆ ಮೂಡಿ ಬಂದಿತು. ಉಡುಪಿ ಜಿಲ್ಲೆಯು ಹಿಂದೆ ಕೂಡ ಹಲವು ಬಾರಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿತ್ತು.
ಅವರ ಅಧಿಕಾರದ ಅವಧಿಯಲ್ಲಿ ಯಾವ ಶಿಕ್ಷಕರಿಗೂ ನೋವಾಗುವಂತೆ ಮಾತನಾಡಲಿಲ್ಲ. ನಗುಮೊಗದಿಂದ ಎಲ್ಲರನ್ನೂ ಪ್ರೋತ್ಸಾಹಿಸುವ ಅವರ ನಡೆ ಅನುಕರಣೀಯ. ಫಲಿತಾಂಶಕ್ಕಾಗಿ ಎಂದೂ ಅವರು ಒತ್ತಡ ಹಾಕಲಿಲ್ಲ. ಎಲ್ಲ ಶಿಕ್ಷಕರನ್ನು ತುಂಬ ಪ್ರೀತಿಯಿಂದ ಮಾತಾಡಿಸಿದರು. ಹೆಚ್ಚಿನ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ಸಮಸ್ಯೆಯನ್ನು ಆಲಿಸಿದರು. ಬಹಳ ಸುಂದರವಾಗಿ ಫಲಿತಾಂಶದ ವಿಶ್ಲೇಷಣೆ ಮಾಡಿದರು.
ಯಾವುದೇ ರಾಜಕೀಯದ ಒತ್ತಡಗಳನ್ನು ತುಂಬ ತಾಳ್ಮೆಯಿಂದಲೇ ನಿಭಾಯಿಸಿದರು. ತಾನೊಬ್ಬ ಜಿಲ್ಲಾಮಟ್ಟದ ಗೆಜೆಟೆಡ್ ಅಧಿಕಾರಿ ಎಂದವರು ಎಲ್ಲಿಯೂ ಅಹಂ ಪ್ರದರ್ಶನ ಮಾಡಲಿಲ್ಲ. ಪ್ರೀತಿಯಿಂದಲೇ ಎಲ್ಲರ ಮನವನ್ನು ಗೆದ್ದರು. ಅವರ ಶೈಕ್ಷಣಿಕ ನಾಯಕತ್ವದಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲಿಯೇ ಶ್ರೇಷ್ಟ ಸ್ಥಾನವನ್ನು ಪಡೆಯಿತು ಎನ್ನುವುದು ಅಕ್ಷರಶಃ ಸತ್ಯ.
ನಿಮ್ಮ ನಿವೃತ್ತಿ ಜೀವನವು ನೆಮ್ಮದಿ ಮತ್ತು ಆರೋಗ್ಯಗಳಿಂದ ಕೂಡಿರಲಿ ಎನ್ನುವುದು ನಮ್ಮ ಆಶಯ. ನಿಮಗೆ ಉಡುಪಿ ಶ್ರೀಕೃಷ್ಣ ನಿವೃತ್ತಿ ಜೀವನದಲ್ಲಿ ಸುಖ ಶಾಂತಿ ಆರೋಗ್ಯ ನೀಡಲಿ .......
ಡಾ. ರವೀಂದ್ರ ಕುಮಾರ್ , ಕೆ ಪಿ ಎಸ್ ಹಿರಿಯಡ್ಕ

