ಉಡುಪಿ: ಡಿ.14ರಂದು ಆಕಾಶದಲ್ಲಿ ಜೆಮಿನಿಡ್ ಉಲ್ಕಾವೃಷ್ಟಿ ಸಂಭವಿಸಲಿದ್ದು ಖಗೋಳಾಸಕ್ತರು ಖಗೋಳ ವಿಸ್ಮಯವನ್ನು ವೀಕ್ಷಿಸಬಹುದು. ಅಂದು ರಾತ್ರಿ 9ರಿಂದ ಮುಂಜಾನೆವರೆಗೂ ಉಲ್ಕಾವೃಷ್ಟಿಯಾಗಲಿದ್ದು, ಮಧ್ಯರಾತ್ರಿ 1ರಿಂದ ಬೆಳಗಿನ ಜಾವ 4ರವರೆಗೆ ಉಲ್ಕಾವೃಷ್ಟಿ ವೀಕ್ಷಣೆಗೆ ಪ್ರಶಸ್ತ ಸಮಯ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.
ಧೂಮಕೇತುವು ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವಾಗ ಸೂರ್ಯನ ಶಾಖದಿಂದ ಅವಶೇಷಗಳು ಪಥದಲ್ಲಿ ಉಳಿಯುತ್ತವೆ. ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುತ್ತ ಧೂಮಕೇತುವಿನ ಪಥ ತಲುಪಿದಾಗ ಅವಶೇಷಗಳು ಭೂಮಿಯ ವಾತಾವರಣದಲ್ಲಿ ಉಲ್ಕೆಗಳಾಗಿ ಗೋಚರಿಸುತ್ತಭೂಮಿಯು ಧೂಮಕೇತುವಿನ ಪಥವನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ಹಾದು ಹೋಗುವುದರಿಂದ ಪ್ರತಿವರ್ಷ ನಿರ್ದಿಷ್ಟ ಅವಧಿಯಲ್ಲಿ ಉಲ್ಕಾವೃಷ್ಟಿಯಾಗುತ್ತದೆ. ಉದಾಹರಣೆಗೆ, ಪ್ರತಿವರ್ಷ ನವೆಂಬರ್‌ನಲ್ಲಿ ಭೂಮಿಯು ‘ಟೆಂಪಲ್-ಟಟ್ಟಲ್’ ಧೂಮಕೇತುವಿನ ಪಥವನ್ನು ಹಾದು ಹೋಗುವಾಗ ಸಿಂಹರಾಶಿಯಿಂದ ಲಿಯೊನಿಡ್ ಉಲ್ಕಾವೃಷ್ಟಿ ಗೋಚರಿಸುತ್ತದೆ ಮಿಥುನ ರಾಶಿಯಿಂದ ಆರಂಭವಾಗುವ ಜೆಮಿನಿಡ್ ಉಲ್ಕಾವೃಷ್ಟಿಯು ಧೂಮಕೇತುವಿನ ಬದಲಾಗಿ ‘3200 ಫೆಥನ್’ ಎಂಬ ಕ್ಷುದ್ರಗ್ರಹದಿಂದ ಉಧ್ಭವಿಸುತ್ತದೆ. ಈ ಕ್ಷುದ್ರಗ್ರಹದ ಅವಶೇಷಗಳು ಬಹಳ ಹೆಚ್ಚಾಗಿರುವುದರಿಂದ ಜೆಮಿನಿಡ್ ಉಲ್ಕಾವೃಷ್ಟಿ ಒಂದು ಕುತೂಹಲಕಾರಿ ವಿದ್ಯಮಾನ ಎನ್ನುತ್ತಾರೆ ಖಗೋಳ ತಜ್ಞರು.
ಡಿ.14ರಂದು ಗಂಟೆಗೆ 120ರಷ್ಟು ಉಲ್ಕೆಗಳು ಗೋಚರಿಸುತ್ತವೆ. ಶುಭ್ರ ಆಕಾಶದಲ್ಲಿ 30 ಸೆಕೆಂಡ್‌ಗಳಿಗೊಮ್ಮೆ ಉಲ್ಕಾಪಾತ ಗೋಚರಿಸಲಿದ್ದು ಮಹತ್ವದ ವಿದ್ಯಮಾನವಾಗಿರಲಿದೆ. ಉಲ್ಕಾವೃಷ್ಟಿ ಸೌಂದರ್ಯವನ್ನು ವೀಕ್ಷಿಸಲು ಕತ್ತಲಿನ ಪ್ರದೇಶ ಹೆಚ್ಚು ಸೂಕ್ತವಾಗಿದ್ದು, ಅಂದು ರಾತ್ರಿ 9ಗಂಟೆಯ ಹೊತ್ತಿಗೆ ಪೂರ್ವ-ಕ್ಷಿತಿಜದಿಂದ ಮಿಥುನ ರಾಶಿಯು ಉದಯವಾಗುತ್ತದೆ.ಇದೇ ದಿಕ್ಕಿನ ಸ್ವಲ್ಪ ಮೇಲ್ಭಾಗದಲ್ಲಿ ಪಂಚಕೋನಾಕೃತಿ ಗೋಚರಿಸಲಿದ್ದು, ಅದನ್ನು ವಿಜಯಸಾರಥಿ ನಕ್ಷತ್ರಪುಂಜ ಎನ್ನಲಾಗುತ್ತದೆ. ಈ ನಕ್ಷತ್ರಪುಂಜದಲ್ಲಿ ಹೆಚ್ಚು ಪ್ರಕಾಶಮಾನವಾಗಿ ಗೋಚರಿಸುವ ನಕ್ಷತ್ರವೇ ಬ್ರಹ್ಮ ಹೃದಯ. ಬ್ರಹ್ಮ ಹೃದಯದ ಕೆಳಗೆ ಮಿಥುನ ರಾಶಿಯ ಪುನರ್ವಸು ನಕ್ಷತ್ರವನ್ನು (ಕ್ಯಾಸ್ಟರ್ ಹಾಗೂ ಪೋಲಕ್ಸ್‌ಗಳ ಜೋಡಿ) ಗುರುತಿಸಬಹುದು. ಈ ನಕ್ಷತ್ರದ ಮೇಲಿನಿಂದ ಜೆಮಿನಿಡ್ ಉಲ್ಕಾವೃಷ್ಟಿ ಉಧ್ಭವಿಸಲಿದ್ದು, ರಾತ್ರಿ 9 ರಿಂದ ಸೂರ್ಯೋದಯದವರೆಗೆ ಕಣ್ತುಂಬಿಕೊಳ್ಳಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.
No comments:
Post a Comment