ಸರ್ವರಿಗೂ *ವೈಕುಂಠ ಏಕಾದಶಿ* ಯ ಶುಭಾಶಯಗಳು.
ಶ್ರೀಹರಿ ನಾರಾಯಣನು ವೈಕುಂಠ ದ್ವಾರವನ್ನು ತೆರೆದು ತನ್ನ ದರ್ಶನವನ್ನು ನೀಡುವ ದಿನವೇ ಈ ವೈಕುಂಠ ಏಕಾದಶಿ. ಈ ಏಕಾದಶಿ ವ್ರತವು ಹಿಂದೂ ಧರ್ಮೀಯರಿಗೆ ಅತ್ಯಂತ ವಿಶೇಷವಾದ ದಿನವಾಗಿದೆ
ವೈಕುಂಠ ಏಕಾದಶಿ ವ್ರತವನ್ನು ಮುಕ್ಕೋಟಿ ಏಕಾದಶಿ, ಪುತ್ರದಾ ಏಕಾದಶಿ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ವೈಕುಂಠ ಏಕಾದಶಿ ದಿನದಂದು ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆಯಾದರೂ ಆಂಧ್ರಪ್ರದೇಶದ ತಿರುಪತಿ ತಿರುಮಲ ಸನ್ನಿಧಾನದಲ್ಲಿ ವಿಜೃಂಭಣೆಯಿಂದ ಇದನ್ನು ಆಚರಿಸಲಾಗುತ್ತದೆ. ಈ ದಿನ ದೇವಾಲಯಕ್ಕೆ ಭೇಟಿ ನಿಡಲು ದೇಶ - ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ದೇಶದಾದ್ಯಂತ ಹಿಂದೂಗಳು ಈ ಪವಿತ್ರ ದಿನವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ. ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿಯೊಂದು ವಿಷ್ಣು ದೇವನ ದೇವಾಲಯದಲ್ಲೂ ವೈಕುಂಠ ಏಕಾದಶಿ ದಿನದಂದು ವಿಶೇಷ ಪ್ರಾರ್ಥನೆ, ಪೂಜೆ - ಪುನಸ್ಕಾರಗಳು, ಯಜ್ಞಗಳು, ಪ್ರವಚನ ಹಾಗೂ ವಿವಿಧ ರೀತಿಯಾದ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ. ವೈಕುಂಠ ಏಕಾದಶಿಯ ಮುಖ್ಯವಾದ ವಿಷಯವೇನೆಂದರೆ, ಈ ದಿನದಂದು ಪವಿತ್ರ ವೈಕುಂಠ ದ್ವಾರವನ್ನು ತೆರೆಯಲಾಗುವುದು.
ವೈಕುಂಠ ಏಕಾದಶಿ ಪೂಜೆಯ ಮಹತ್ವ ::
• ಜನರ ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಏಕಾದಶಿಯನ್ನು ಸೂಕ್ತ ದಿನವೆಂದು ಪರಿಗಣಿಸಲಾಗಿದೆ.
- ಬ್ರಹ್ಮಾಂಡದ ರಕ್ಷಕನಾಗಿರುವ ವಿಷ್ಣು ದೇವನನ್ನು ಈ ದಿನದಂದು ಪೂಜಿಸಲಾಗುತ್ತದೆ.
- ಈ ದಿನ ಮಾಡುವ ಉಪವಾಸ, ಪೂಜೆ, ದಾನದಂತಹ ಪುಣ್ಯ ಕಾರ್ಯಗಳು ಜನ್ಮ ಜನ್ಮಗಳ ಪಾಪಗಳನ್ನು ತೊಡೆದು ಹಾಕುತ್ತದೆ.
- ಈ ದಿನದ ಪೂಜೆಯಿಂದ ಜನನ - ಮರಣ ಚಕ್ರದಿಂದ ಮುಕ್ತಿ ಪಡೆಯುತ್ತಾರೆ.
ವೈಕುಂಠ ಏಕಾದಶಿ ಪೂಜೆಯ ವಿಧಾನ ::
- ವೈಕುಂಠ ಏಕಾದಶಿ ದಿನದಂದು ವಿಷ್ಣು ಭಕ್ತರು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುದ್ಧರಾಗಿ ಹೊಸ ಹಾಗೂ ಶುದ್ಧವಾದ ಬಟ್ಟೆಯನ್ನು ಧರಿಸುತ್ತಾರೆ.
- ದೇವರ ಕೋಣೆಯಲ್ಲಿ ಅಥವಾ ಪೂಜೆ ಮಾಡುವ ಸ್ಥಳದಲ್ಲಿ ವಿಷ್ಣು ದೇವನ ಫೋಟೋ ಅಥವಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ.
- ಈ ದಿನ ವಿಷ್ಣು ದೇವನೊಂದಿಗೆ ಲಕ್ಷ್ಮಿ ದೇವಿಯನ್ನು ಕೂಡ ನೀವು ಪೂಜಿಸಬೇಕಾಗುತ್ತದೆ.
- ವಿಷ್ಣುವಿಗೆ ಅಭಿಷೇಕವನ್ನು ಮಾಡಿ.
- ಹೂವುಗಳಿಂದ ಅಲಂಕಾರ ಮಾಡಿ.
- ತುಳಸಿಯೊಂದಿಗೆ ಸಿಹಿಯನ್ನು ನೈವೇದ್ಯವಾಗಿ ಅರ್ಪಿಸಿ.
- ದೀಪ, ಧೂಪವನ್ನು ಬೆಳಗಿ ಆರತಿಯನ್ನು ಮಾಡಿ.
- ಈ ದಿನ ವಿಷ್ಣು ಮಂತ್ರಗಳನ್ನು ಪಠಿಸುವುದು ಪ್ರಯೋಜನಕಾರಿಯಾಗಿರುತ್ತದೆ.
ವೈಕುಂಠ ಏಕಾದಶಿ ಫಲ ::
- ಈ ದಿನ ಉಪವಾಸ ವ್ರತವನ್ನು ಮಾಡುತ್ತಾರೆ ಮತ್ತು ಜಪ, ಧ್ಯಾನವನ್ನು ಮಾಡುತ್ತಾರೆ.
- ಈ ದಿನ ವಿಷ್ಣು ದೇವಾಲಯಕ್ಕೆ ಭೇಟಿ ನೀಡುವುದು, ಜಾಗರಣೆ ಮಾಡುವುದು ಶುಭ.
- ಏಕಾದಶಿಯು ಆತ್ಮಸಾಕ್ಷಾತ್ಕಾರ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
- ಆತ್ಮ ಮತ್ತು ಮನಸ್ಸನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.
- ಜನನ ಮತ್ತು ಮರಣದ ಚಕ್ರದಿಂದ ಮುಕ್ತಿಯನ್ನು ಸಾಧಿಸುವ ದಿನ ಇದಾಗಿದೆ.
- ಅದೃಷ್ಟ, ಸಂಪತ್ತು ಮತ್ತು ಯಶಸ್ಸಿನಂತಹ ಭೌತಿಕ ಲಾಭಗಳು ದೊರೆಯುತ್ತವೆ.
*ದಂತಕಥೆಗಳ ಪ್ರಕಾರ* ....
# ಸುಕೇತುಮಾನ ಎಂಬ ರಾಜನಿದ್ದನು. ಅವನಿಗೆ ಮಕ್ಕಳಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರಾಜನು ತನ್ನ ಮರಣದ ನಂತರ ತನಗೆ ಹಾಗೂ ತನ್ನ ಪಿತೃಗಳಿಗೆ ಮೋಕ್ಷವನ್ನು ನೀಡುವವರಾರು ಎಂದು ಚಿಂತೆಗೆ ಒಳಗಾಗುತ್ತಾನೆ. ಸಂತಾನವಿಲ್ಲದ ಚಿಂತೆಯಲ್ಲಿ ಬೇಸತ್ತ ರಾಜನು ತನ್ನ ರಾಜ್ಯವನ್ನು ತ್ಯಜಿಸಿ ಕಾಡಿಗೆ ಹೋದನು. ಈ ಸಮಯದಲ್ಲಿ ಅವನು ಋಷಿಗಳನ್ನು ಭೇಟಿಯಾದನು. ರಾಜನು ತನ್ನ ಸಮಸ್ಯೆಗಳನ್ನು ಋಷಿಗಳಿಗೆ ಹೇಳಿದನು. ಆ ಸಮಯದಲ್ಲಿ ಋಷಿಗಳು ರಾಜನಿಗೆ ಪುತ್ರದಾ ಏಕಾದಶಿ ಎಂದು ಕರೆಯಲಾಗುವ ವೈಕುಂಠ ಏಕಾದಶಿ ಪೂಜೆಯನ್ನು ಹಾಗೂ ಉಪವಾಸವನ್ನು ಆಚರಿಸಲು ಸಲಹೆ ನೀಡಿದರು. ಅದರಂತೆಯೇ ರಾಜನು ಪುತ್ರದಾ ಏಕಾದಶಿಯನ್ನು ವಿಧಿ-ವಿಧಾನಗಳ ಪ್ರಕಾರ ಆಚರಿಸಿದನು. ಇದರಿಂದಾಗಿ ಅವನು ಪುತ್ರ ಸಂತಾನವನ್ನು ಪಡೆದುಕೊಂಡು ಸಂತೋಷದ ಜೀವನವನ್ನು ನಡೆಸಲು ಪ್ರಾರಂಭಿಸಿದನು.
# ಕಲ್ಪಾಂತ್ಯದಲ್ಲಿ ಮಹಾವಿಷ್ಣು ವಟಪತ್ರಶಾಯಿಯಾಗಿ ಯೋಗನಿದ್ರೆಯಲ್ಲಿದ್ದಾಗ ಆತನ ಕಿವಿಯ ಗುಗ್ಗೆಯಿಂದ (ಕರ್ಣಮಲ) ಇಬ್ಬರು ರಾಕ್ಷಸರು ಜನಿಸುತ್ತಾರೆ. ಬ್ರಹ್ಮನ ಪ್ರೇರಣೆಯಿಂದ ಅವರಲ್ಲಿ ವಾಯುಸಂಚಾರವಾಗುತ್ತದೆ. ರಾಕ್ಷಸರಾಗಿ ಬಲಶಾಲಿಗಳಾದ ಅವರು ಮಹಾಬಲರಾಗಿ ದೇವಲೋಕವನ್ನೇ ವಶಪಡಿಸುತ್ತಾರೆ. ಬ್ರಹ್ಮ ಅವರನ್ನು ಸ್ಪರ್ಶಿಸಿ ನೋಡಲು ಒಬ್ಬ ಮೃದುವಾಗಿ ಕಂಡ. ಅವನೇ ಮಧು. ಮತ್ತೊಬ್ಬ ಕಲ್ಲಿನಂತೆ ಕರ್ಕಶವಾಗಿ ಕಂಡ. ಅವನೇ ಕೈಟಭ. ಪರಾಕ್ರಮಿಗಳಾದ ಮಧು ಕೈಟಭ ಇವರನ್ನು ವಿಷ್ಣು ಸಂಹರಿಸಿದ. ವೈಕುಂಠ ಲೋಕದ ಉತ್ತರ ದ್ವಾರದ ಮೂಲಕ ಅವರನ್ನು ಪ್ರವೇಶಿಸುವಂತೆ ಮಾಡಿ ಸದ್ಗತಿಯನ್ನು ಕರುಣಿಸುತ್ತಾನೆ. ಸದ್ಗತಿಯನ್ನು ಕರುಣಿಸಿದ್ದು ಏಕಾದಶಿಯಂದು. ಈ ಕಾರಣಕ್ಕೆ ವೈಕುಂಠ ಏಕಾದಶಿಯಂದು ವಿಶೇಷ ದ್ವಾರವನ್ನು ನಿರ್ಮಿಸಿ, ಅದರ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆಯುವ ಆಚರಣೆ ಇಂದು ಪ್ರಚಲಿತಕ್ಕೆ ಬಂದಿದೆ. ಭಕ್ತಿಪೂರ್ವಕವಾಗಿ ದೇವರಿಗೆ ಶರಣಾದರೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆಯಿದೆ.
# ಅಮೃತ ಸಿಕ್ಕಿದ ದಿನ :
ಒಂದು ದಿನ ಋಷಿ ದೂರ್ವಾಸ ಇಂದ್ರನ ಆಸ್ಥಾನಕ್ಕೆ ಬಂದು ಬಹಳ ಗೌರವದಿಂದ ಇಂದ್ರನಿಗೆ ಹೂವಿನ ಹಾರವನ್ನು ಅರ್ಪಿಸುತ್ತಾನೆ. ಇಂದ್ರನು ಆ ಹಾರವನ್ನು ತೆಗೆದುಕೊಂಡು ತನ್ನ ಆನೆಯ ಐರಾವತದ ಹಣೆಯ ಮೇಲೆ ಇಡುತ್ತಾನೆ. ಆನೆಯು ಹಾರವನ್ನು ಸೊಂಡಿಲಿನಿಂದ ತೆಗೆದುಕೊಂಡು ಭೂಮಿಯ ಮೇಲೆ ಎಸೆಯುತ್ತದೆ. ನಾನು ನೀಡಿದ ಹಾರಕ್ಕೆ ಅಗೌರವ ತೋರಿದ್ದಕ್ಕೆ ಸಿಟ್ಟಾದ ದೂರ್ವಾಸ ಮುನಿ ಕೋಪಗೊಂಡು, "ನಿನಗೆ ಅಹಂಕಾರ ಬಂದಿದೆ, ಹೇಗೆ ನನ್ನ ಹಾರವನ್ನು ನೆಲಕ್ಕೆ ಎಸೆದು ಹಾಳು ಮಾಡಿದೆಯೋ ಅದೇ ರೀತಿ ನಿನ್ನ ರಾಜ್ಯವು ಹಾಳಾಗಲಿ" ಎಂದು ಇಂದ್ರನಿಗೆ ಶಾಪವನ್ನು ಕೊಡುತ್ತಾನೆ. ದೂರ್ವಾಸನ ಶಾಪದ ಪರಿಣಾಮ ದೇವತೆಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಎಲ್ಲಾ ತರಕಾರಿ ಉತ್ಪನ್ನಗಳು ಮತ್ತು ಸಸ್ಯಗಳು ಸಾಯಲು ಪ್ರಾರಂಭಿಸುತ್ತವೆ, ಪುರುಷರು ದಾನ ಮಾಡುವುದನ್ನು ನಿಲ್ಲಿಸುತ್ತಾರೆ, ಮನಸ್ಸುಗಳು ಭ್ರಷ್ಟವಾಗುತ್ತವೆ, ಜನರು ಅಂತಿಮ ಇಂದ್ರಿಯ ಸುಖಗಳಲ್ಲಿ ತೊಡಗಲು ಪ್ರಾರಂಭಿಸುತ್ತಾರೆ. ಅಮರಾವತಿಯಲ್ಲಿ ದೇವರುಗಳು ದುರ್ಬಲವಾಗುತ್ತಿದ್ದಂತೆ, ರಾಕ್ಷಸರು ದೇವತೆಗಳ ಮೇಲೆ ದಾಳಿ ಮಾಡಿ ಅವರನ್ನು ಸೋಲಿಸುತ್ತಾರೆ.
ಸೋತ ನಂತರ ಇಂದ್ರಾದಿ ದೇವತೆಗಳು ವಿಷ್ಣುವಿನ ಬಳಿ ಹೋಗಿ ಮೊರೆ ಇಡುತ್ತಾರೆ. ಆಗ ಆಮೃತ ಪಡೆಯಬೇಕೆಂದು ಹೇಳಿದ ವಿಷ್ಣು ನೀವು ಮತ್ತು ರಾಕ್ಷಸರು "ಸಮುದ್ರ ಮಂಥನ" ಮಾಡಬೇಕು ಎಂದು ಸೂಚಿಸುತ್ತಾನೆ. ವೈಕುಂಠ ಏಕಾದಶಿಯ ಪವಿತ್ರ ದಿನದಂದು 'ಸಾಗರ ಮಂಥನ' ನಡೆಯಿತು. ದೇವರು ಮತ್ತು ರಾಕ್ಷಸರು ಅಮೃತಕ್ಕಾಗಿ ಕ್ಷೀರ ಸಮುದ್ರವನ್ನು ಮಥನ ಮಾಡಿದಾಗ ಮೊದಲು ಕಠೋರವಾದ ವಿಷ ಜನಿಸಿತು. ನಂತರ ಜೇಷ್ಠಾದೇವಿ ಜನಿಸಿದಳು. ಬಳಿಕ ಲಕ್ಷ್ಮೀ ಪಾಲ್ಗಡಲಿಂದ ಹೊರಬಂದಳು. ಕೊನೆಯದಾಗಿ ಸಿಕ್ಕಿದ್ದು ಅಮೃತ. ಕ್ಷೀರ ಸಾಗರದಲ್ಲಿ ಸಿಕ್ಕಿದ ಅಮೃತವನ್ನು ಮೋಹಿನಿ ರೂಪದಲ್ಲಿದ್ದ ವಿಷ್ಣು ದೇವತೆಗಳಿಗೆ ನೀಡಿದಳು.
ಅಮೃತ ಸಿಕ್ಕಿದ ಈ ಮಂಗಳಕರ ದಿನದಂದು ಮೃತಪಡುವ ಜನರು ಜನನ ಮತ್ತು ಮರಣ ಚಕ್ರದಿಂದ ಮುಕ್ತರಾಗುತ್ತಾರೆ ಮತ್ತು ಭಗವಾನ್ ವಿಷ್ಣುವಿನ ನಿವಾಸ ಅಥವಾ ವೈಕುಂಠ ಧಾಮವನ್ನು ತಲುಪುತ್ತಾರೆ ಎಂಬುದು ನಂಬಿಕೆ.
ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಈ ದಿನ ಕಠಿಣ ಉಪವಾಸ ವ್ರತ ಆಚರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅಲ್ಲದೆ ಈ ದಿನದಂದು ಭಗವಾನ್ ವಿಷ್ಣುವಿಗೆ ಭಕ್ತಿ ಹಾಗೂ ಸಮರ್ಪಣಾ ಭಾವದಿಂದ ಪೂಜೆ ಸಲ್ಲಿಸಲಾಗುತ್ತದೆ.
ಏಕಾದಶಿ ವ್ರತವನ್ನು ಯಾರು ಭಕ್ತಿಯಿಂದ ಆಚರಿಸುತ್ತಾರೋ ಅವರ ಎಲ್ಲಾ ಕಷ್ಟಗಳು ಹಾಗೂ ಸಮಸ್ಯೆಗಳನ್ನು ವಿಷ್ಣು ಪರಿಹಾರ ಮಾಡುತ್ತಾನೆ. ಅದರಲ್ಲೂ ವೈಕುಂಠ ಏಕಾದಶಿ ಸಮಯದಲ್ಲಿ ವಿಷ್ಣುವಿನ ನೆಲೆಯಾದ ವೈಕುಂಠದ ದ್ವಾರಗಳು ತೆರೆಯುತ್ತವೆ. ಈ ವಿಶೇಷ ದಿನದಂದು ವಿಷ್ಣು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ.
ವೈಕುಂಠ ಏಕಾದಶಿಯನ್ನು ವೆಂಕಟೇಶ್ವರ ದೇವರಿಗೆ ಅರ್ಪಿತವಾದ ಅತ್ಯಂತ ಪ್ರಮುಖ ಉಪವಾಸ ದಿನವೆಂದು ಪರಿಗಣಿಸಲಾಗಿದೆ. ವರ್ಷದ ಎಲ್ಲಾ ಏಕಾದಶಿಗಳಲ್ಲಿ ಉಪವಾಸ ಮಾಡಲು ಸಾಧ್ಯವಾಗದವರು, ಶುಕ್ಲ ಪಕ್ಷ ಅಥವಾ ಮಾರ್ಗಶಿರದ ಹನ್ನೊಂದನೇ ಕ್ಷೀಣ ಚಂದ್ರನಂದು ಬರುವ ವೈಕುಂಠ ಏಕಾದಶಿಯಂದು ಉಪವಾಸ ಮತ್ತು ಪೂಜೆ ಮಾಡುವ ಮೂಲಕ ವರ್ಷದ ಎಲ್ಲಾ ಏಕಾದಶಿಗಳಲ್ಲಿ ಉಪವಾಸ ಮತ್ತು ಪೂಜೆಯ ಪ್ರಯೋಜನಗಳನ್ನು ಪಡೆಯಬಹುದು. ವೈಕುಂಠ ಏಕಾದಶಿಯನ್ನು ಅತ್ಯಂತ ಪ್ರಯೋಜನಕಾರಿ ಉಪವಾಸವೆಂದು ಪರಿಗಣಿಸಲಾಗಿದೆ. ಇದು ಭಗವಂತನ ಅನುಗ್ರಹವನ್ನು ಪಡೆಯಲು ಉತ್ತಮ ಮಾರ್ಗವಾಗಿದೆ.
* ಡಾ. ರವೀಂದ್ರ ಕುಮಾರ್ (ಆರ್ ಕೆ ) ಹಿರಿಯಡ್ಕ,
🙏🙏🙏🙏🙏🙏🙏🙏
.jpeg)
No comments:
Post a Comment